ರಾಮಯ್ಯ, ಕೆ ಎಚ್
	1879-1933. ಆಡಳಿತಗಾರರು, ಸಮಾಜ ಸುಧಾರಕರು, ಹಿಂದಿನ ಮೈಸೂರು ಸಂಸ್ಥಾನದ ಸಹಕಾರ ಇಲಾಖೆಯಲ್ಲಿ ರಿಜಿಸ್ಟ್ರಾರ್ ಆಗಿದ್ದರು. ಇವರ ಹಿರಿಯರು ದೊಡ್ಡಬಳ್ಳಾಪುರ ತಾಲ್ಲೂಕಿನ ಕಲ್ಲುದೇವರ ಹಳ್ಳಿಯವರು. ಇವರ ಅಜ್ಜ ಚಿಕ್ಕಣ್ಣಗೌಡರು ಒಕ್ಕಲು ಕಸಬನ್ನು ತೊರೆದು ಬೆಂಗಳೂರಿಗೆ ಬಂದು ನೆಲಸಿದರು. ಅವರು ಕಂಟ್ರಾಕ್ಟ್ ಕೆಲಸವನ್ನು ಮಾಡಿಸುತ್ತ ಚಿಕ್ಕಣ್ಣ ಮೇಸ್ತ್ರಿಯೆಂದು ಹೆಸರಾಗಿದ್ದರು. ಚಿಕ್ಕಣ್ಣಮೇಸ್ತಿಯವರ ಮಗ ಹನುಮಾಶಾಸ್ತ್ರಿ. ಇವರೇ ರಾಮಯ್ಯನವರ ತಂದೆ. ತಾಯಿ ನಂಜಮ್ಮ. ರಾಮಯ್ಯನವರು 1970 ಜುಲೈ 12 ರಂದು ಜನಿಸಿದರು. ಬಾಲ್ಯದಲ್ಲಿ ಇವರ ಮೇಲೆ ತಾಯಿಯ ಪ್ರಭಾವ ಗಾಢವಾಗಿತ್ತು. ಇವರ ತಾಯಿ ಆಗ ಅಸ್ಪøಶ್ಯರೆನಿಸಿಕೊಂಡಿದ್ದವರನ್ನು ಮನೆ ಒಳಗೆ ಕರೆದುಕೊಳ್ಳುವಷ್ಟು ವಿಶಾಲ ಹೃದಯದವರಾಗಿದ್ದರು. ರಾಮಯ್ಯನವರ ಬಾಲ್ಯದ ವಿದ್ಯಾಭ್ಯಾಸ ಬೆಂಗಳೂರಿನಲ್ಲಿ ನಡೆಯಿತು. ಲಂಡನ್ ಮಿಷನ್ ಹೈಸ್ಕೂಲಿನಲ್ಲಿ ವ್ಯಾಸಂಗ ಮಾಡಿ ಮದರಾಸಿನಲ್ಲಿ ಪದವಿಶಿಕ್ಷಣವನ್ನು ಮುಂದುವರಿಸಿದರು. ಈ ಮಧ್ಯೆ ತಂದೆ ತೀರಿಹೋದರೂ ಬಡತನದಲ್ಲಿಯೇ ಓದಿ 1903 ರಲ್ಲಿ ಬಿ.ಎ. ಪದವಿ ಗಳಿಸಿದರು. ಅನಂತರ ನ್ಯಾಯ ಶಾಸ್ತ್ರದಲ್ಲಿ ಬಿ.ಎಲ್ ಪದವಿ ಗಳಿಸಿಕೊಂಡರು (1904).

  	ರಾಮಯ್ಯನವರು ವಿದ್ಯಾರ್ಥಿದೆಸೆಯಲ್ಲಿದ್ದಾಗಲೆ ಪ್ರತಿಭಾವಂತರೆಂದೂ ಒಳ್ಳೆಯ ವಾಗ್ಮಿಗಳೆಂದೂ ಹೆಸರಾಗಿದ್ದರು. ಮದರಾಸಿನಲ್ಲಿ ವಿವೇಕಾನಂದರನ್ನು ಸಂದರ್ಶಿಸುವ ಮತ್ತು ಅವರೊಂದಿಗೆ ಸಂಭಾಷಿಸುವ ಸಂಯೋಗ ಇವರಿಗೆ ಲಭಿಸಿತು. ಉನ್ನತ ಶಿಕ್ಷಣ, ಲೋಕಜ್ಞಾನ ಮತ್ತು ಮಹಾಪುರುಷರ ಸಂಸರ್ಗದಿಂದ ಇವರ ವ್ಯಕ್ತಿತ್ವ ಪುಷ್ಟಿಗೊಂಡಿತು. ಇವರು ವ್ಯಾಸಂಗ ಮುಗಿಸಿ ಮೈಸೂರು ಸಂಸ್ಥಾನದ ಸೇವೆಗೆ ಸೇರಿ ಸಹಕಾರ ಇಲಾಖೆಯ ರಿಜಿಸ್ಟ್ರಾರ್, ರೈತರ ಸಂಯೋಜನಾಧಿಕಾರಿ, ಹಿಂದುಳಿದ ವರ್ಗಗಳ ಮೇಲ್ವಿಚಾರಕ ಈ ಮುಂತಾದ ಉನ್ನತ ಅಧಿಕಾರಗಳನ್ನು ನಿರ್ವಹಿಸಿದರು. ಇವರು ಕೆಲವು ವರ್ಷಗಳ ಕಾಲ ಪ್ರಜಾಪ್ರತಿನಿಧಿ ಸಭೆಯ ಸದಸ್ಯರು ಆಗಿದ್ದರು.

  	ರಾಮಯ್ಯನವರು 1913 ರಲ್ಲಿ ಇಂಗ್ಲೆಂಡಿಗೆ ಹೋಗಿ ಬಾರ್-ಎಟ್-ಲಾ ಪದವಿ ಪಡೆದು ಭಾರತಕ್ಕೆ ಹಿಂದಿರುಗಿದರು (1917). ಪುನಃ 1933 ರಲ್ಲಿ ಇವರು ಆಗಿನ ಮೈಸೂರು ಯುವ ರಾಜರೊಂದಿಗೆ ಇಂಗ್ಲೆಂಡ್ ಪ್ರವಾಸ ಮಾಡಿ ಬಂದರು. 1933 ಅಕ್ಟೋಬರ್ 5 ರಂದು ನಿಧನಹೊಂದಿದರು.

  	ರಾಮಯ್ಯನವರು ಆಡಳಿತದಲ್ಲಿ ದಕ್ಷತೆಗೆ ಹೆಸರಾಗಿದ್ದಂತೆ ಸಮಾಜಸೇವೆಯಲ್ಲಿ ಹಿಂದುಳಿದ ವರ್ಗಗಳ ನೇತಾರರೂ ಆಗಿದ್ದರು. ಇವರು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬೆಂಗಳೂರಿನಲ್ಲಿ ಒಕ್ಕಲಿಗರ ಸಂಘವನ್ನು ಸ್ಥಾಪಿಸಿದರು. ಚನ್ನಪಟ್ಟಣ, ಚುಂಚನ ಕಟ್ಟೆ ಮತ್ತು ಮೇಲುಕೋಟೆಯಲ್ಲಿ ಬಡವಿದ್ಯಾರ್ಥಿಗಳಿಗಾಗಿ ವಿದ್ಯಾನಿಲಯಗಳು, ಶಾಲೆಗಳು ಸ್ಥಾಪಿತವಾಗಲು ಅಪಾರವಾಗಿ ಶ್ರಮಿಸಿದರು. ಶ್ರೀ ಆದಿ ಚುಂಚನಗಿರಿ ಮಠದ ಅಭಿವೃದ್ಧಿ ಕಾರ್ಯದಲ್ಲೂ ಇವರು ನೆರವಾಗಿದ್ದಾರೆ. 1928 ಫೆಬ್ರುವರಿ ತಿಂಗಳಿನಲ್ಲಿ ಇವರ ಒಕ್ಕಲಿಗರ ಸಮಾಜದ ಏಳಿಗೆಗೆ ಮಾತ್ರವಲ್ಲದೆ ಪರಿಶಿಷ್ಟ ವರ್ಗದ ಕಲ್ಯಾಣಕ್ಕಾಗಿಯೂ ಬಹುವಾಗಿ ಶ್ರಮಿಸಿದರು.

	ರಾಮಯ್ಯನವರ ನೆನಪಿಗಾಗಿ ಮೈಸೂರಿನ ಒಂಟಿಕೊಪ್ಪಲಿನಲ್ಲಿ ಕೆ.ಎಚ್. ರಾಮಯ್ಯ ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿನಿಲಯವನ್ನು ಸ್ಥಾಪಿಸಲಾಗಿದೆ. ಪ್ರಸಿದ್ಧ ಸಾಮಾಜಿಕ ಕಾರ್ಯಕರ್ತರಾದ ಯಶೋಧರಾ ದಾಸಪ್ಪ ಮತ್ತು ಮೈಸೂರು ಅರಮನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಕ್ಯಾಪ್ಟ್‍ನ್ ಕೃಷ್ಣ ಇವರ ಮಕ್ಕಳು. 						

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ